ನವದೆಹಲಿ: ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವುದು ವೈಯಕ್ತಿಕ ಸಾಧನೆ ಅಥವಾ ವೈಭವೀಕರಣದ ವಿಚಾರವಲ್ಲ. ಬದಲಾಗಿ ಜನರ ಆಶೀರ್ವಾದದಿಂದ ದೊರೆತ ಅವಕಾಶ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ಬುಧವಾರ ನಡೆದ ‘ವಿಕಸಿತ ಭಾರತ ಸಂಕಲ್ಪ ಸಭೆ’ಯಲ್ಲಿ ಮಾತನಾಡಿದ ಅವರು, 25 ವರ್ಷಗಳ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಇಂತಹ ಮೈಲಿಗಲ್ಲು ತಲುಪುತ್ತೇನೆ ಎಂದು ತಾವು ಊಹಿಸಿರಲಿಲ್ಲ ಎಂದು ಸ್ಮರಿಸಿದರು.
“ಇಂದು ಸರ್ಕಾರದ ಮುಖ್ಯಸ್ಥನಾಗಿ ನಿರಂತರ 25 ವರ್ಷಗಳ ಸೇವೆ ಪೂರ್ಣಗೊಳಿಸಿದ್ದೇನೆ. ಇದು ಜನರ ಆಶೀರ್ವಾದ. ದೇಶದ ಜನರ ಮುಂದೆ ನಾನು ತಲೆಬಾಗುತ್ತೇನೆ” ಎಂದು ಮೋದಿ ಹೇಳಿದರು.

ವೈಯಕ್ತಿಕ ಮಹತ್ವಾಕಾಂಕ್ಷೆ ಇರಲಿಲ್ಲ
ಚುನಾವಣಾ ರಾಜಕೀಯ ಪ್ರವೇಶಕ್ಕೂ ಮುನ್ನ ತಾವು ಬುಡಕಟ್ಟು ಸಮುದಾಯಗಳ ನಡುವೆ ಹಾಗೂ ಪರ್ವತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದೆ. ನಂತರ ಬಿಜೆಪಿ ಸಂಘಟನೆಯಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಲು ಅವಕಾಶ ದೊರೆಯಿತು ಎಂದು ಮೋದಿ ಹೇಳಿದರು.
ಚುನಾವಣೆಯಲ್ಲಿ ಸ್ಪರ್ಧಿಸುವ ಅಥವಾ ಅಧಿಕಾರ ಪಡೆಯುವ ವೈಯಕ್ತಿಕ ಮಹತ್ವಾಕಾಂಕ್ಷೆ ತಮ್ಮಲ್ಲಿರಲಿಲ್ಲ. “ನಾನು ವೈಯಕ್ತಿಕ ಮಹತ್ವಾಕಾಂಕ್ಷೆಗಾಗಿ ಅಲ್ಲ, ಒಂದು ಧ್ಯೇಯಕ್ಕಾಗಿ ಬದುಕಿದ ವ್ಯಕ್ತಿ” ಎಂದು ಅವರು ಹೇಳಿದರು.
ತಮ್ಮ 25 ವರ್ಷಗಳ ಸಾರ್ವಜನಿಕ ಜೀವನದ ಪಯಣಕ್ಕೆ ದೇಶದ ಜನರು ಮತ್ತು ಬಿಜೆಪಿ ಕಾರ್ಯಕರ್ತರೇ ಪ್ರಮುಖ ಕಾರಣ ಎಂದು ಮೋದಿ ಹೇಳಿದರು. ಕೋಟ್ಯಂತರ ಜನರ ವಿಶ್ವಾಸ ಹಾಗೂ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮವೇ ತಮ್ಮ ಶಕ್ತಿ ಎಂದರು.
“25 ವರ್ಷಗಳ ಸಾರ್ವಜನಿಕ ವಿಶ್ವಾಸ ಮತ್ತು ಅನುಭವ ನನ್ನ ವೈಯಕ್ತಿಕ ಆಸ್ತಿಯಲ್ಲ. ಅದು ದೇಶಕ್ಕೆ ಸೇರಿದ ಸಂಪತ್ತು” ಎಂದು ಪ್ರಧಾನಿ ಹೇಳಿದರು.
25 years of serving the people… I bow to 140 crore Indians for their trust and look forward to serving the nation with greater commitment in the times to come. https://t.co/rO1LXY9Csm
— Narendra Modi (@narendramodi) October 7, 2026
‘ಜೀವನಪೂರ್ತಿ ವಿದ್ಯಾರ್ಥಿ’
ತಾವು ಜೀವನಪೂರ್ತಿ ವಿದ್ಯಾರ್ಥಿಯಾಗಿಯೇ ಉಳಿದಿದ್ದೇನೆ ಎಂದ ಮೋದಿ, ವಡನಗರದ ಶಾಲಾ ಶಿಕ್ಷಕರು ಕಲಿಯುವ ಉತ್ಸಾಹದ ಮಹತ್ವವನ್ನು ತಿಳಿಸಿದ್ದರು ಎಂದು ಸ್ಮರಿಸಿದರು.
ತಮ್ಮನ್ನು ಬೆಂಬಲಿಸಿದವರು ವಿಶ್ವಾಸದ ಶಕ್ತಿಯನ್ನು ಕಲಿಸಿದರೆ, ವಿರೋಧಿಸಿದವರು ಆತ್ಮಾವಲೋಕನ ಹಾಗೂ ಪ್ರಜಾಪ್ರಭುತ್ವದ ಶಕ್ತಿಯನ್ನು ಕಲಿಸಿದ್ದಾರೆ ಎಂದರು.
ಬಿಜೆಪಿ, ಎನ್‌ಡಿಎ ಹಾಗೂ ರಾಜಕೀಯ ಸಹೋದ್ಯೋಗಿಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಇಟ್ಟಿರುವ ನಂಬಿಕೆಗೆ ಮೋದಿ ಕೃತಜ್ಞತೆ ಸಲ್ಲಿಸಿದರು.
2047ರ ವೇಳೆಗೆ ವಿಕಸಿತ ಭಾರತ
ದೇಶದ ಭವಿಷ್ಯದ ಗುರಿಗಳ ಕುರಿತು ಮಾತನಾಡಿದ ಮೋದಿ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು, ಆತ್ಮನಿರ್ಭರ ಭಾರತ ನಿರ್ಮಿಸುವುದು, ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವುದು, ಒಲಿಂಪಿಕ್ಸ್ ಆಯೋಜಿಸುವುದು ಹಾಗೂ ಮಾನವ ಸಹಿತ ಬಾಹ್ಯಾಕಾಶ ಯಾನ ಕ್ಷೇತ್ರದಲ್ಲಿ ಮತ್ತಷ್ಟು ಮುನ್ನಡೆಯುವುದು ತಮ್ಮ ಸಂಕಲ್ಪ ಎಂದು ಹೇಳಿದರು.
ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಜನರು ಹೊಸ ಸಂಕಲ್ಪದೊಂದಿಗೆ ಮುನ್ನಡೆಯಬೇಕು ಎಂದು ಕರೆ ನೀಡಿದ ಅವರು, “ನಾವು ಇದನ್ನು ಸಾಧಿಸುತ್ತೇವೆ” ಎಂಬ ರಾಷ್ಟ್ರೀಯ ವಿಶ್ವಾಸವನ್ನು ವ್ಯಕ್ತಪಡಿಸಿದರು.
