ಜಂಟಿ ಕ್ರೆಡಿಟ್ ಮೆಕ್ಯಾನಿಸಂ: ಭಾರತ-ಜಪಾನ್ ಕಾರ್ಯಾಚರಣೆ ಕೈಪಿಡಿ ಬಿಡುಗಡೆ

ನವದೆಹಲಿ: ಕಡಿಮೆ ಇಂಗಾಲ ತಂತ್ರಜ್ಞಾನಗಳ ಬಳಕೆ ಹಾಗೂ ಹವಾಮಾನ ಕ್ರಮಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ಸಹಕಾರವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಜಪಾನ್ ಜಂಟಿ ಕ್ರೆಡಿಟ್ ಮೆಕ್ಯಾನಿಸಂ (JCM)ಗೆ ಸಂಬಂಧಿಸಿದ ಕಾರ್ಯಾಚರಣೆ ಕೈಪಿಡಿಯನ್ನು ಬಿಡುಗಡೆ ಮಾಡಿವೆ.

ಭಾರತದಲ್ಲಿನ ಜಪಾನ್ ರಾಯಭಾರಿ ಕೀಚಿ ಒನೊ ಹಾಗೂ ಅಂದಿನ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEFCC) ಕಾರ್ಯದರ್ಶಿ ತನ್ಮಯ್ ಕುಮಾರ್ ಅವರು ಸೆ.30, 2026ರಂದು ನವದೆಹಲಿಯಲ್ಲಿ ಕೈಪಿಡಿಯನ್ನು ಜಂಟಿಯಾಗಿ ಬಿಡುಗಡೆ ಮಾಡಿದರು.

ಭಾರತ-ಜಪಾನ್ JCM ಮೂಲಕ ಸುಧಾರಿತ ಕಡಿಮೆ ಇಂಗಾಲ ತಂತ್ರಜ್ಞಾನಗಳ ನಿಯೋಜನೆಗೆ ಉತ್ತೇಜನ ನೀಡುವುದು, ಹವಾಮಾನ ಹಣಕಾಸು ಸಜ್ಜುಗೊಳಿಸುವುದು ಹಾಗೂ ಭಾರತದಲ್ಲಿ ಹೆಚ್ಚಿನ ಸಮಗ್ರತೆಯ ಹೊರಸೂಸುವಿಕೆ ಕಡಿತ ಮತ್ತು ಹೊರಸೂಸುವಿಕೆ ತೆಗೆಯುವ ಯೋಜನೆಗಳಿಗೆ ಬೆಂಬಲ ನೀಡುವುದು ಉದ್ದೇಶವಾಗಿದೆ. ಇದರೊಂದಿಗೆ ತಂತ್ರಜ್ಞಾನ ಸಹಕಾರಕ್ಕೂ ಉತ್ತೇಜನ ದೊರೆಯಲಿದೆ.

ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವುದರ ಜತೆಗೆ ಅಂತರರಾಷ್ಟ್ರೀಯ ಇಂಗಾಲ ಮಾರುಕಟ್ಟೆಗಳಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸವನ್ನು ಬಲಪಡಿಸುವ ಗುರಿಯನ್ನು JCM ಹೊಂದಿದೆ.

2025ರ ಆಗಸ್ಟ್ 7ರಂದು ಭಾರತ ಮತ್ತು ಜಪಾನ್ ನಡುವೆ ಸಹಕಾರದ ಜ್ಞಾಪಕ ಪತ್ರಕ್ಕೆ ಸಹಿ ಹಾಕಲಾಗಿತ್ತು. ಬಳಿಕ 2026ರ ಜೂನ್ 8ರಂದು ಅನುಷ್ಠಾನ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಇದರ ಮುಂದುವರಿದ ಹಂತವಾಗಿ ಕಾರ್ಯಾಚರಣೆ ಕೈಪಿಡಿ ಬಿಡುಗಡೆಯಾಗಿದೆ.

ಪ್ಯಾರಿಸ್ ಒಪ್ಪಂದದ ಆರ್ಟಿಕಲ್ 6.2ರ ಅಡಿಯಲ್ಲಿ JCM ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಕಾರ್ಯವಿಧಾನದ ಚೌಕಟ್ಟನ್ನು ಕೈಪಿಡಿ ಒದಗಿಸುತ್ತದೆ. ಪ್ರಾಜೆಕ್ಟ್ ಐಡಿಯಾ ನೋಟ್ ಸಲ್ಲಿಕೆಯಿಂದ ಹಿಡಿದು JCM ಕ್ರೆಡಿಟ್‌ಗಳ ವಿತರಣೆ ಹಾಗೂ ಅಧಿಕೃತಗೊಳಿಸುವವರೆಗಿನ ಸಂಪೂರ್ಣ ಯೋಜನಾ ಚಕ್ರವನ್ನು ಇದು ಒಳಗೊಂಡಿದೆ.

ಕಾರ್ಯಾಚರಣೆ ಕೈಪಿಡಿ ಬಿಡುಗಡೆಯೊಂದಿಗೆ ಭಾರತ-ಜಪಾನ್ JCM ಸಾಂಸ್ಥಿಕ ಸಿದ್ಧತೆಯ ಹಂತದಿಂದ ದ್ವಿಪಕ್ಷೀಯ ಕಾರ್ಬನ್ ಕ್ರೆಡಿಟಿಂಗ್ ವ್ಯವಸ್ಥೆಯ ಅನುಷ್ಠಾನದತ್ತ ಮಹತ್ವದ ಹೆಜ್ಜೆ ಇಟ್ಟಿದೆ.