ನವದೆಹಲಿ: 2027ರಿಂದ 2035ರವರೆಗೆ ನಡೆಯಲಿರುವ ಪ್ರಮುಖ ಪುರುಷರ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿ ಮತ್ತು ಅರ್ಹತಾ ಸ್ವರೂಪಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅನುಮೋದನೆ ನೀಡಿದೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
2029ರ ಅಕ್ಟೋಬರ್ 9ರಿಂದ 28ರವರೆಗೆ ಚಾಂಪಿಯನ್ಸ್ ಟ್ರೋಫಿ ಭಾರತದಲ್ಲಿ ನಡೆಯಲಿದೆ. 2031ರ ಅಕ್ಟೋಬರ್ 9ರಿಂದ ನವೆಂಬರ್ 23ರವರೆಗೆ ಏಕದಿನ ವಿಶ್ವಕಪ್ಗೆ ಭಾರತ ಮತ್ತು ಬಾಂಗ್ಲಾದೇಶ ಜಂಟಿ ಆತಿಥ್ಯ ವಹಿಸಲಿವೆ.
2028ರ ಟಿ20 ವಿಶ್ವಕಪ್ಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಆತಿಥ್ಯ ನೀಡಲಿದ್ದು, 2029ರ ಡಬ್ಲ್ಯುಟಿಸಿ ಫೈನಲ್ ಇಂಗ್ಲೆಂಡ್ನಲ್ಲಿ ನಡೆಯಲಿದೆ. 2030ರ ಟಿ20 ವಿಶ್ವಕಪ್ಗೆ ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಜಂಟಿ ಆತಿಥ್ಯ ವಹಿಸಲಿವೆ. 2031ರ ಡಬ್ಲ್ಯುಟಿಸಿ ಫೈನಲ್ ಕೂಡ ಇಂಗ್ಲೆಂಡ್ನಲ್ಲಿ ನಡೆಯಲಿದೆ.

2032ರ ಟಿ20 ವಿಶ್ವಕಪ್ ಸೇರಿದಂತೆ 2035ರವರೆಗಿನ ಕೆಲವು ಟೂರ್ನಿಗಳ ಆತಿಥೇಯರ ಘೋಷಣೆ ಬಾಕಿಯಿದೆ.
ಇದೇ ವೇಳೆ, 2027ರ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ 10 ತಂಡಗಳು 23 ಪಂದ್ಯಗಳಲ್ಲಿ ಸೆಣಸಲಿವೆ. 2028ರ ಟಿ20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ 16 ತಂಡಗಳು 31 ಪಂದ್ಯಗಳನ್ನು ಆಡಲಿದ್ದು, ಎಂಟು ತಂಡಗಳಿಗೆ ವಿಶ್ವಕಪ್ ಪ್ರವೇಶದ ಅವಕಾಶ ಸಿಗಲಿದೆ. ಪೂರ್ಣ ಮತ್ತು ಸಹಾಯಕ ಸದಸ್ಯ ರಾಷ್ಟ್ರಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಐಸಿಸಿಯ ಉದ್ದೇಶವಾಗಿದೆ.
