ಮೈಸೂರು: ಕಂಬಳ ಕೇವಲ ಕ್ರೀಡೆಯಲ್ಲ; ಅದು ಭಕ್ತಿಯ ಬೇರು, ಕೃಷಿಯ ತಳಹದಿ ಹಾಗೂ ಪರಂಪರೆಯ ಶಕ್ತಿಯನ್ನು ಒಳಗೊಂಡ ಕರಾವಳಿಯ ಸಾಂಸ್ಕೃತಿಕ ಹಬ್ಬ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮೈಸೂರು ದಸರಾ ಅಂಗವಾಗಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಕಂಬಳ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ನಾಡಿನ ಹಬ್ಬವಾದ ದಸರಾಕ್ಕೆ ಕರಾವಳಿಯ ಕಂಬಳವನ್ನು ಪರಿಚಯಿಸುವ ಮೂಲಕ ರಾಜ್ಯದ ವಿವಿಧ ಭಾಗಗಳ ಸಂಸ್ಕೃತಿ ಮತ್ತು ಪರಂಪರೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಸುಮಾರು 800 ವರ್ಷಗಳ ಹಿಂದೆ ರೈತರ ಬದುಕಿನ ರಕ್ಷಣೆ ಮತ್ತು ಕದ್ರಿ ಮಂಜುನಾಥನ ಸೇವೆ, ಪ್ರಾರ್ಥನೆಯೊಂದಿಗೆ ಕಂಬಳ ಆರಂಭವಾಯಿತು ಎಂಬ ಐತಿಹ್ಯವಿದೆ. ಭತ್ತದ ಗದ್ದೆ, ಮಳೆ, ಮಣ್ಣು, ಕೋಣಗಳು ಮತ್ತು ರೈತರ ಬದುಕಿನ ಪ್ರತಿಬಿಂಬವಾಗಿ ಕಂಬಳ ಬೆಳೆದಿದೆ. ಕೃಷಿ ಶ್ರಮಿಕರನ್ನು ಗೌರವಿಸುವ ಹಾಗೂ ನಾಡಿನ ಕ್ರೀಡೆ, ಕಲೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ದಸರಾದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಂಬಳ ಆಯೋಜನೆ ಕುರಿತು ಟೀಕೆಗಳು ವ್ಯಕ್ತವಾಗಿದ್ದರೂ, “ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎಂದು ಹೇಳಿದ ಅವರು, ನಾಡಿನ ಎಲ್ಲ ಸಂಸ್ಕೃತಿ ಮತ್ತು ಪರಂಪರೆಗಳಿಗೆ ದಸರಾ ವೇದಿಕೆಯಲ್ಲಿ ಅವಕಾಶ ಕಲ್ಪಿಸುವುದು ಸರ್ಕಾರದ ಉದ್ದೇಶ ಎಂದರು.
ಕರಾವಳಿಯಿಂದ ಸುಮಾರು 3,000 ಮಂದಿ ಕಂಬಳದ ಆಯೋಜನೆ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಅವರು, ವಿಜಯನಗರದ ಅರಸರೂ ಕರಾವಳಿಯ ಕೋಣಗಳಿಗೆ ಗೌರವ ನೀಡುತ್ತಿದ್ದರು ಎಂಬ ಇತಿಹಾಸವಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಇತಿಹಾಸ ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕಂಬಳ ಕರಾವಳಿಯ ಸಾಂಸ್ಕೃತಿಕ ಹಬ್ಬವಾಗಿದ್ದು, ಅದನ್ನು ನಾಡಿನ ಕ್ರೀಡೆಯಾಗಿ ಬೆಳೆಸಬೇಕು. ಸರ್ಕಾರವು 23 ಕಂಬಳ ಕೂಟಗಳಿಗೆ ತಲಾ ₹5 ಲಕ್ಷ ನೆರವು ನೀಡುತ್ತಿದೆ ಎಂದು ತಿಳಿಸಿದರು.
“ಕರಾವಳಿಯಿಂದ ಮೈಸೂರು, ಕಲ್ಯಾಣ ಕರ್ನಾಟಕದವರೆಗೆ ಒಂದೇ ನಾಡು, ಹಲವು ಸಂಸ್ಕೃತಿ, ಒಂದೇ ಕನ್ನಡತನವೇ ಅಖಂಡ ಕರ್ನಾಟಕದ ಸಂದೇಶ” ಎಂದು ಅವರು ಹೇಳಿದರು. ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುವುದರ ಜತೆಗೆ ಕಲೆಗಳನ್ನು ಪ್ರೋತ್ಸಾಹಿಸಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದರು.
ಕಂಬಳದ ಓಟದಲ್ಲಿ ಕೆಲವರು ಒಂಬತ್ತು ಸೆಕೆಂಡುಗಳಲ್ಲಿ ಗುರಿ ತಲುಪಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಕಂಬಳದಲ್ಲಿ ಭಾಗವಹಿಸುವವರಿಗೆ ಸೂಕ್ತ ತರಬೇತಿ ನೀಡಿದರೆ ಅಥ್ಲೆಟಿಕ್ಸ್ನಲ್ಲಿಯೂ ಸಾಧನೆ ಮಾಡಲು ಸಾಧ್ಯ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ನಾಡಿನ ವಿವಿಧ ಜನಪದ ಕಲೆಗಳಿಗೂ ದಸರಾದಲ್ಲಿ ಅವಕಾಶ ನೀಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಕಂಬಳವನ್ನು ವೀಕ್ಷಿಸಿರುವುದು ಸಂತಸದ ಸಂಗತಿ ಎಂದರು.
ಮೈಸೂರು ದಸರಾ ಕಾರ್ಯಕ್ರಮಗಳ ಕುರಿತು ಜನರು ರೀಲ್ಸ್ ಸಿದ್ಧಪಡಿಸಿ, ‘mysoredasara_2026’ ಪುಟವನ್ನು ಟ್ಯಾಗ್ ಮಾಡುವಂತೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಅತ್ಯುತ್ತಮ 100 ರೀಲ್ಸ್ಗಳನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ಕೊನೆಯಲ್ಲಿ, ದಸರಾ ವೀಕ್ಷಿಸಲು ಆಗಮಿಸಿರುವ ಎಲ್ಲರಿಗೂ ಶುಭ ಹಾರೈಸಿದ ಅವರು, ತಾಯಿ ಚಾಮುಂಡೇಶ್ವರಿಯ ಕೃಪೆ ಎಲ್ಲರ ಮೇಲಿರಲಿ ಎಂದು ಹಾರೈಸಿದರು.
