ತಮಿಳುನಾಡಿನ 52 ದೇಗುಲಗಳಲ್ಲಿ ಸ್ಮಾರ್ಟ್‌ಫೋನ್‌ ಬ್ಯಾನ್‌: ₹5 ಕೊಟ್ಟು ಮೊಬೈಲ್‌ ಠೇವಣಿ ಕಡ್ಡಾಯ!

ಚೆನ್ನೈ: ದೇವಾಲಯಗಳ ಪಾವಿತ್ರ್ಯ, ಶಾಂತಿ ಹಾಗೂ ಭದ್ರತೆ ಕಾಪಾಡುವ ಉದ್ದೇಶದಿಂದ ತಮಿಳುನಾಡಿನ 52 ಪ್ರಮುಖ ದೇವಾಲಯಗಳ ಆವರಣದಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಮತ್ತು ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಹೊರಡಿಸಿರುವ ಆದೇಶ ಮಂಗಳವಾರದಿಂದಲೇ ಜಾರಿಗೆ ಬಂದಿದೆ. ದೇವಾಲಯಗಳಲ್ಲಿ ಸೆಲ್ಫಿ, ಫೋಟೋ, ವಿಡಿಯೋ ಹಾಗೂ ರೀಲ್ಸ್ ಮಾಡುವುದನ್ನು ತಡೆಯುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.

ದೇವಾಲಯಕ್ಕೆ ಬರುವ ಭಕ್ತರು ಪ್ರವೇಶದ್ವಾರದಲ್ಲಿರುವ ವಿಶೇಷ ಕೌಂಟರ್‌ನಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಠೇವಣಿ ಇಡಬೇಕು. ಪ್ರತಿ ಮೊಬೈಲ್‌ಗೆ ₹5 ನಿರ್ವಹಣಾ ಶುಲ್ಕ ಪಾವತಿಸಿದ ಬಳಿಕ ಟೋಕನ್ ಅಥವಾ ಕಂಪ್ಯೂಟರ್ ರಸೀದಿ ನೀಡಲಾಗುತ್ತದೆ. ಪೂಜೆ ಮುಗಿದ ನಂತರ ರಸೀದಿ ತೋರಿಸಿ ಮೊಬೈಲ್‌ ವಾಪಸ್ ಪಡೆಯಬಹುದು.

ಆದರೆ ಕ್ಯಾಮೆರಾ ಇಲ್ಲದ ಸಾಮಾನ್ಯ ಕೀಪ್ಯಾಡ್‌ ಫೋನ್‌ಗಳಿಗೆ ವಿನಾಯಿತಿ ನೀಡಲಾಗಿದೆ. ಇಂತಹ ಫೋನ್‌ಗಳನ್ನು ದೇವಾಲಯದೊಳಗೆ ಕೊಂಡೊಯ್ಯಬಹುದು.

ಗರ್ಭಗುಡಿಯಲ್ಲಿರುವ ವಿಗ್ರಹಗಳು, ಪೂಜಾ ಕೈಂಕರ್ಯಗಳು ಹಾಗೂ ವಿಐಪಿಗಳ ಆಗಮನದ ವೇಳೆ ಫೋಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೂ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.

ಕಾಂಚೀಪುರಂನ ಪ್ರಸಿದ್ಧ ದೇವರಾಜಸ್ವಾಮಿ-ಅತ್ತಿ ವರದರ್ ದೇವಾಲಯದಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ. ಭಕ್ತರ ಮೊಬೈಲ್‌ ಸಂಖ್ಯೆ ಹಾಗೂ ಮೊಬೈಲ್‌ ಮಾಡೆಲ್‌ ವಿವರ ದಾಖಲಿಸಿ ಕಂಪ್ಯೂಟರೀಕೃತ ರಸೀದಿ ನೀಡಲಾಗುತ್ತಿದೆ.

ದೇವಾಲಯದ ಪ್ರಶಾಂತ ವಾತಾವರಣ ಕಾಪಾಡಲು ಮೊಬೈಲ್‌ ನಿಷೇಧ ಉತ್ತಮ ಕ್ರಮ ಎಂದು ಕೆಲ ಭಕ್ತರು ಸ್ವಾಗತಿಸಿದ್ದಾರೆ. ಆದರೆ ಪ್ರತಿ ಬಾರಿ ₹5 ಶುಲ್ಕ ಪಾವತಿಸಬೇಕಾಗಿರುವುದು ಮತ್ತು ಮೊಬೈಲ್‌ ಕೌಂಟರ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿರುವುದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಲೆಬಾಳುವ ಮೊಬೈಲ್‌ಗಳ ಭದ್ರತೆ ಬಗ್ಗೆಯೂ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ. ₹5 ಶುಲ್ಕ ಸರ್ಕಾರದ ಆದಾಯಕ್ಕೆ ಸೇರುವುದಿಲ್ಲ. ಕೌಂಟರ್ ಸಿಬ್ಬಂದಿ ವೇತನ, ಭದ್ರತಾ ಲಾಕರ್‌ ಹಾಗೂ ಮೂಲಸೌಕರ್ಯ ನಿರ್ವಹಣೆಗೆ ಮಾತ್ರ ಬಳಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ತಿರುಚೆಂಡೂರಿನ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಮೊಬೈಲ್‌ ನಿಷೇಧಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು 2022ರ ಡಿಸೆಂಬರ್‌ನಲ್ಲೇ ದೇವಾಲಯಗಳ ಪಾವಿತ್ರ್ಯ ಕಾಪಾಡಲು ಮೊಬೈಲ್‌ ನಿಷೇಧ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಕರ್ನಾಟಕದ ಕೊಲ್ಲೂರು ಮೂಕಾಂಬಿಕಾ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ತಿರುಪತಿ ತಿರುಮಲ ಸೇರಿದಂತೆ ಹಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೂ ದೇವಾಲಯದ ಒಳಾಂಗಣದಲ್ಲಿ ಮೊಬೈಲ್‌ ಬಳಕೆಗೆ ಈಗಾಗಲೇ ನಿರ್ಬಂಧವಿದೆ.