ಎಚ್ಚರ..! ದೇಶದಲ್ಲಿ ವ್ಯಾಪಿಸಿದೆ ‘ನಕಲಿ ಸಿಗರೇಟ್’ ನಿಗೂಢ ಜಾಲ

ನೋಯ್ಡಾ: ನಕಲಿ ಬ್ರ್ಯಾಂಡೆಡ್ ಸಿಗರೇಟ್‌ಗಳನ್ನು ಮರುಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಭೇದಿಸಿ ಇಬ್ಬರನ್ನು ಬಂಧಿಸಿದ್ದಾರೆ.

ಗೌತಮ್ ಬುದ್ಧ ನಗರ ಜಿಲ್ಲೆಯ ಫೇಸ್-2 ಪೊಲೀಸ್ ಠಾಣೆ ವ್ಯಾಪ್ತಿಯ ಕಕ್ರಾಲಾ ಪುಸ್ತಾ ರಸ್ತೆಯ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಬುಲಂದ್‌ಶಹರ್ ಜಿಲ್ಲೆಯ ಸಂದೀಪ್ ಹಾಗೂ ಸಂದೀಪ್ ಅಲಿಯಾಸ್ ಸಂಜೀವ್ ಅಲಿಯಾಸ್ ಸನ್ನಿ ಬಂಧಿತರು.

ಆರೋಪಿಗಳು ಖಾಲಿ ಸಿಗರೇಟ್ ಪ್ಯಾಕೆಟ್‌ಗಳಿಗೆ ತಂಬಾಕು ತುಂಬಿ ಯಂತ್ರಗಳ ಮೂಲಕ ಮರುಪ್ಯಾಕಿಂಗ್ ಮಾಡುತ್ತಿದ್ದರು. ಗೋಲ್ಡ್ ಫ್ಲೇಕ್ ಮತ್ತು ಕ್ಯಾಪ್ಸ್ಟನ್ ಬ್ರ್ಯಾಂಡ್‌ಗಳನ್ನು ಹೋಲುವ ನಕಲಿ ಪ್ಯಾಕೆಟ್‌ಗಳಲ್ಲಿ ಸಿಗರೇಟ್‌ಗಳನ್ನು ತುಂಬಿ ಸಣ್ಣ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ 4,940 ಖಾಲಿ ಪ್ಯಾಕೆಟ್‌ಗಳು, 700 ಗ್ರಾಂ ಸಡಿಲ ತಂಬಾಕು, 128 ಗೋಲ್ಡ್ ಫ್ಲೇಕ್ ಹಾಗೂ 57 ಕ್ಯಾಪ್ಸ್ಟನ್ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ಯಾಕಿಂಗ್‌ಗೆ ಬಳಸುತ್ತಿದ್ದ ಮೂರು ಯಂತ್ರಗಳು ಮತ್ತು ಸಾಗಣೆಗೆ ಬಳಸುತ್ತಿದ್ದ ಕಾರನ್ನೂ ಜಪ್ತಿ ಮಾಡಲಾಗಿದೆ.

ಎರಡನೇ ಆರೋಪಿ ವಿರುದ್ಧ ಈಗಾಗಲೇ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4), 349 ಹಾಗೂ ಟ್ರೇಡ್ ಮಾರ್ಕ್ಸ್ ಕಾಯ್ದೆಯ ಸೆಕ್ಷನ್ 104ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಾಲದ ಪ್ರಮುಖ ಆರೋಪಿಗಳು, ಇತರ ಸಹಚರರು ಹಾಗೂ ನಕಲಿ ಸಿಗರೇಟ್ ವಿತರಣೆಗೊಂಡ ಪ್ರದೇಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.