ಇಸ್ಲಮಾಬಾದ್: ಭಾರತವು ಪ್ರಾದೇಶಿಕ ಸ್ಥಿರತೆಯನ್ನು ದುರ್ಬಲಗೊಳಿಸುತ್ತಿದ್ದು, ಪಾಕಿಸ್ತಾನದಲ್ಲಿ ಅಸ್ಥಿರತೆ ಸೃಷ್ಟಿಸಲು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರದ (ಎನ್ಸಿಎ) ಸಲಹೆಗಾರ, ನಿವೃತ್ತ ಲೆಫ್ಟಿನೆಂಟ್ ಜನರಲ್ ಮಝರ್ ಜಮೀಲ್ ಆರೋಪಿಸಿದ್ದಾರೆ.
ಅಕ್ಟೋಬರ್ 13ರಂದು ಲಂಡನ್ನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ (ಐಐಎಸ್ಎಸ್) ಆಯೋಜಿಸಿದ್ದ ದಕ್ಷಿಣ ಏಷ್ಯಾದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭಾರತವು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮತ್ತು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಸೇರಿದಂತೆ ಹಲವು ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ದೂರಿದ್ದಾರೆ.
ಭಯೋತ್ಪಾದನೆಯನ್ನು ತನ್ನ ನೀತಿಯ ಸಾಧನವನ್ನಾಗಿ ಬಳಸಿಕೊಳ್ಳುತ್ತಿರುವ ಭಾರತ, ಪಾಕಿಸ್ತಾನದಲ್ಲಿ ಅಸ್ಥಿರತೆ ಸೃಷ್ಟಿಸಲು ‘ದೋವಲ್ ಸಿದ್ಧಾಂತ’ವನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಜಮೀಲ್ ಆರೋಪಿಸಿದ್ದಾರೆ. ಆದರೆ, ಈ ಆರೋಪಗಳಿಗೆ ಸ್ವತಂತ್ರವಾಗಿ ದೃಢಪಟ್ಟ ಪುರಾವೆಗಳನ್ನು ಅವರು ಒದಗಿಸಿರುವ ಬಗ್ಗೆ ಮಾಹಿತಿ ಇಲ್ಲ.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಮುಕ್ತಿ ವಾಹಿನಿಗೆ ಭಾರತ ನೀಡಿದ ಬೆಂಬಲ ಹಾಗೂ 1980ರ ದಶಕದಲ್ಲಿ ಎಲ್ಟಿಟಿಇಗೆ ನೀಡಿದ ಎನ್ನಲಾದ ಬೆಂಬಲವನ್ನು ಅವರು ಉಲ್ಲೇಖಿಸಿದ್ದಾರೆ. 2001ರಿಂದ 2014ರವರೆಗೆ ಅಫ್ಘಾನಿಸ್ತಾನದಲ್ಲಿ ಅಂತರರಾಷ್ಟ್ರೀಯ ಭದ್ರತಾ ನೆರವು ಪಡೆ (ಐಎಸ್ಎಎಫ್) ಕಾರ್ಯಾಚರಣೆ ನಡೆದ ಅವಧಿಯಲ್ಲಿ ಭಾರತ ಆರು ದೂತಾವಾಸ ಕಚೇರಿಗಳನ್ನು ತೆರೆದಿದ್ದನ್ನೂ ತಮ್ಮ ಆರೋಪಗಳಿಗೆ ಆಧಾರವಾಗಿ ಪ್ರಸ್ತಾಪಿಸಿದ್ದಾರೆ.
ಬ್ರಹ್ಮೋಸ್ ಕ್ಷಿಪಣಿ ಬಳಕೆ ಬಗ್ಗೆ ಆರೋಪ
‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಭಾರತವು ಪರಮಾಣು ಹಾಗೂ ಸಾಂಪ್ರದಾಯಿಕ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿದೆ ಎಂದೂ ಜಮೀಲ್ ಆರೋಪಿಸಿದ್ದಾರೆ.
ಆದರೆ, ಈ ಆರೋಪಕ್ಕೆ ದೃಢೀಕೃತ ಪುರಾವೆಗಳಿಲ್ಲ. ಬ್ರಹ್ಮೋಸ್ ಸಾಂಪ್ರದಾಯಿಕ ಸಿಡಿತಲೆ ಹೊಂದಿರುವ ಕ್ರೂಸ್ ಕ್ಷಿಪಣಿಯಾಗಿದ್ದು, ಭಾರತದ ಪರಮಾಣು ಶಸ್ತ್ರಾಸ್ತ್ರಗಳ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ನ ಭಾಗವಲ್ಲ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಭದ್ರತಾ ಉದ್ವಿಗ್ನತೆಯ ನಡುವೆಯೇ ಈ ಆರೋಪಗಳು ಮುನ್ನೆಲೆಗೆ ಬಂದಿವೆ.
