ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ದೇಶಾದ್ಯಂತ ಚರ್ಚೆ ಮತ್ತು ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಮಧ್ಯರಾತ್ರಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ. ಈ ವೇಳೆ ತಮ್ಮ ಹಿಂದಿನ ವಿಡಿಯೋಗೆ ವ್ಯಕ್ತವಾದ ಪ್ರತಿಕ್ರಿಯೆಗೆ ಯುವಕರಿಗೆ ಧನ್ಯವಾದ ತಿಳಿಸಿದ್ದಾರೆ.
ಗುರುವಾರ ರಾತ್ರಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸೆಲ್ಫಿ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅದರ ಬೆನ್ನಲ್ಲೇ ಕೇವಲ ಒಂದೇ ರಾತ್ರಿಯಲ್ಲಿ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಗೆ ಸುಮಾರು 11 ಲಕ್ಷ ಹೊಸ ಅನುಯಾಯಿಗಳು ಸೇರ್ಪಡೆಯಾಗಿದ್ದಾರೆ.
ವಿಡಿಯೋ ಪ್ರಕಟಿಸುವ ಮೊದಲು ಪ್ರಧಾನಿ ಮೋದಿ ಅವರ ಇನ್‌ಸ್ಟಾಗ್ರಾಮ್ ಖಾತೆಗೆ ಸುಮಾರು 101 ಮಿಲಿಯನ್ ಅನುಯಾಯಿಗಳಿದ್ದರೆ, ವಿಡಿಯೋ ವೈರಲ್ ಆದ ಬಳಿಕ ಆ ಸಂಖ್ಯೆ 102 ಮಿಲಿಯನ್‌ಗಿಂತ ಹೆಚ್ಚಾಗಿದೆ. ಈ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಇದರ ಬೆನ್ನಲ್ಲೇ ಶುಕ್ರವಾರ ತಡರಾತ್ರಿ ಮತ್ತೊಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, “ಥ್ಯಾಂಕ್ಯೂ ಫ್ರೆಂಡ್ಸ್” ಎಂದು ಹೇಳುವ ಮೂಲಕ ತಮ್ಮನ್ನು ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
#WATCH | Prime Minister Narendra Modi shared a video on his Instagram handle;, “Thanks to the youngsters who watched my video yesterday and sent insightful suggestions.”
He says, “Thank you friends. I had the opportunity to meet you late last night. I appreciate the way you… https://t.co/B4hrqwPwic pic.twitter.com/t6hfaVcvET
— ANI (@ANI) July 24, 2026
“ನಿನ್ನೆ ನಿಮ್ಮನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ನನ್ನ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನೀವು ನೀಡಿದ ಸಕಾರಾತ್ಮಕ ಸಲಹೆಗಳು ಮತ್ತು ನಿಮ್ಮ ಪ್ರೀತಿ ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಯುವಕರೇ, ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು” ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ವಿದ್ಯಾರ್ಥಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಬಿಡುಗಡೆ ಮಾಡಿರುವ ಈ ಎರಡನೇ ವಿಡಿಯೋ ಸಂದೇಶ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಹೆಚ್ಚಿನ ಗಮನ ಸೆಳೆದಿದೆ.
