ಅಂಬರೀಶ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡಿ: ಸರ್ಕಾರಕ್ಕೆ ಪ್ರಸ್ತಾವನೆ ರಾಮಲಿಂಗಾ ರೆಡ್ಡಿ ಪ್ರಸ್ತಾವನೆ

ಬೆಂಗಳೂರು: ಕನ್ನಡ ಚಿತ್ರರಂಗ, ನಾಡು-ನುಡಿ ಹಾಗೂ ರಾಜಕೀಯ ಕ್ಷೇತ್ರಕ್ಕೆ ಡಾ. ಅಂಬರೀಶ್ ನೀಡಿದ ಕೊಡುಗೆಯನ್ನು ಪರಿಗಣಿಸಿ, ಮುಂಬರುವ ರಾಜ್ಯೋತ್ಸವದ ಸಂದರ್ಭದಲ್ಲಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ರಾಮಲಿಂಗಾ ರೆಡ್ಡಿ, ಬೆಳ್ಳಿ ತೆರೆಯ ‘ರೆಬೆಲ್ ಸ್ಟಾರ್’ ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಅಚ್ಚುಮೆಚ್ಚಿನ ‘ಮಂಡ್ಯದ ಗಂಡು’ ಡಾ. ಅಂಬರೀಶ್ ಅವರು ಜನರ ನೆನಪಿನಲ್ಲಿ ಸದಾ ಅಮರರಾಗಿದ್ದಾರೆ ಎಂದು ಹೇಳಿದ್ದಾರೆ.

ಕನ್ನಡ ನಾಡು, ನುಡಿ, ಕಲೆ ಹಾಗೂ ರಾಜಕೀಯ ಕ್ಷೇತ್ರಕ್ಕೆ ಅಂಬರೀಶ್ ಅವರ ಕೊಡುಗೆ ಅಪಾರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಂಬರೀಶ್ ಅವರ ಅಭಿಮಾನಿಗಳ ಆಶಯ ಹಾಗೂ ಅವರ ಜನಪ್ರಿಯತೆಯನ್ನು ಪರಿಗಣಿಸಿ, ಮುಂಬರುವ ರಾಜ್ಯೋತ್ಸವದ ಸಂದರ್ಭದಲ್ಲಿ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಅಂಬರೀಶ್ ಅವರಿಗೆ ಸಲ್ಲಬೇಕಾದ ಈ ಗೌರವವು ನಾಡಿನ ಪ್ರತಿಯೊಬ್ಬ ಕನ್ನಡಿಗನ ಗೌರವವೂ ಆಗಿದೆ ಎಂದು ಅವರು ಹೇಳಿದ್ದಾರೆ.