SIR ಸಂದರ್ಭದಲ್ಲಿ ಎಪಿಕ್ ಕಾರ್ಡ್ ಸಂಖ್ಯೆ ಸಹಿತ 11 ಮಾದರಿಯ ಗುರುತಿನ ಚೀಟಿಗಳನ್ನು ಬಳಸಬಹುದು; ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತಂತೆ ಜನತೆಗೆ ಸಂದೇಶ ನೀಡಿರುವ ಸಿಎಂ ಡಿ.ಕೆ.ಶಿವಕುಮಾರ್, ರಾಜ್ಯದ ಎಲ್ಲಾ ಮತದಾರರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಜುಲೈ 29ರವರೆಗೆ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಬಿಎಲ್ಓಗಳು ಒಟ್ಟು ಮೂರು ಬಾರಿ ನಿಮ್ಮ ಮನೆಗಳಿಗೆ ಬಂದು ಎನ್ಯುಮರೇಷನ್ ಅರ್ಜಿ ನೀಡಲಿದ್ದಾರೆ. ಮತದಾರರು ಈ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳು ಹಾಗೂ ಹೊಸ ಫೋಟೋಗಳೊಂದಿಗೆ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸದಿದ್ದರೆ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ. ಆಗಸ್ಟ್ 5ರಂದು ಕರಡು ಮತಪಟ್ಟಿ ಪ್ರಕಟಿಸಲಾಗುವುದು ಹಾಗೂ ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿಎಲ್ಎಗಳು ಕೂಡ ಈ ಪ್ರಕ್ರಿಯೆಯಲ್ಲಿ ನೆರವು ನೀಡಲಿದ್ದಾರೆ ಎಂದವರು ತಿಳಿಸಿದ್ದಾರೆ.

ಅರ್ಜಿ ಸಲ್ಲಿಕೆಗೆ ಜನರು ತಮ್ಮ ಎಪಿಕ್ ಕಾರ್ಡ್ ಸಂಖ್ಯೆ ಸೇರಿದಂತೆ ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಜಾತಿ ಪ್ರಮಾಣಪತ್ರ, ಅರಣ್ಯ ಹಕ್ಕು ಪತ್ರ, ಸರ್ಕಾರಿ ವಸತಿ ದಾಖಲೆ ಮತ್ತು ಪಿಂಚಣಿ ದಾಖಲೆ ಒಳಗೊಂಡಂತೆ 11 ಮಾದರಿಯ ಗುರುತಿನ ಚೀಟಿಗಳನ್ನು ಬಳಸಬಹುದು. ಸರ್ಕಾರ ಈಗಾಗಲೇ 5.50 ಕೋಟಿ ಜನರಿಗೆ (2,54,95,767 ಹಿಂದುಳಿದ ವರ್ಗ ಹಾಗೂ 2,94,51,027 ಎಸ್.ಸಿ/ಎಸ್.ಟಿ) ಅಧಿಕೃತ ಜಾತಿ ಪ್ರಮಾಣಪತ್ರ ವಿತರಿಸಿದ್ದು, ಇವುಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಜಾತಿ ಪ್ರಮಾಣಪತ್ರದಲ್ಲಿ ಸರಿಯಾದ ದೂರವಾಣಿ ಸಂಖ್ಯೆ ನೀಡಿದವರು ವಾಟ್ಸಾಪ್ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ ಎಂದವರು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕಂದಾಯ ಇಲಾಖೆಯ ವತಿಯಿಂದ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಉಪ ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಲಾಗಿದೆ. ಇದಕ್ಕಾಗಿ ರಾಜ್ಯಾದ್ಯಂತ ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್‌ಗಳಲ್ಲಿ ಒಟ್ಟು 49,320 ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಬಾಡಿಗೆ ಮನೆಯಲ್ಲಿ ವಾಸಿಸುವವರು ಆಧಾರ್ ಕಾರ್ಡ್, ಬಾಡಿಗೆ ದಾಖಲೆ ಹಾಗೂ ಆ ಕ್ಷೇತ್ರದ ಮತಪಟ್ಟಿ ಸಂಖ್ಯೆಯನ್ನು ಒದಗಿಸಿ ಸ್ಥಳೀಯ ಆಡಳಿತದಿಂದ ಪ್ರಮಾಣಪತ್ರ ಪಡೆಯಬಹುದು. ನಮ್ಮ ರಾಜ್ಯದ ಪ್ರತಿಯೊಬ್ಬರಿಗೂ ಈ ದಾಖಲೆಗಳನ್ನು ಪಡೆಯಲು ಮುಕ್ತ ಅವಕಾಶವಿದೆ ಎಂದಿದ್ದಾರೆ.

ಮತದಾನದ ಹಕ್ಕು ನಿಮ್ಮ ಬದುಕಿನ ಹಕ್ಕಾಗಿದ್ದು, ಇದನ್ನು ಕಳೆದುಕೊಂಡರೆ ಮುಂದಿನ ದಿನಗಳಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳು, ಪಿಂಚಣಿ ಹಾಗೂ ರಾಜ್ಯ ಸರ್ಕಾರದ ಇತರೆ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗಲಿದೆ. ಸದ್ಯದಲ್ಲೇ ಎಲ್ಲಾ ಯೋಜನೆಗಳ ಫಲಾನುಭವಿಗಳ ಮಾಹಿತಿ ಪಡೆಯುವ ಪ್ರಕ್ರಿಯೆ ಆರಂಭವಾಗಲಿದ್ದು, ತಕ್ಷಣಕ್ಕೆ ಯಾವುದೇ ಯೋಜನೆ ನಿಲ್ಲಿಸುವುದಿಲ್ಲ. ಈಗ 18 ವರ್ಷ ತುಂಬಿರುವ ಹೊಸ ಮತದಾರರು ಚುನಾವಣಾ ಆಯೋಗದ ‘ನಮೂನೆ 6’ (Form 6) ಅನ್ನು ವಯೋಮಿತಿ ದೃಢೀಕರಣ ಪತ್ರದೊಂದಿಗೆ ತುಂಬುವ ಮೂಲಕ ತಮ್ಮ ಮತದಾನದ ಹಕ್ಕನ್ನು ಪಡೆದುಕೊಳ್ಳಬಹುದು ಎಂದವರು ತಿಳಿಸಿದ್ದಾರೆ.