ಆಶಾ ಕಾರ್ಯಕರ್ತೆಯರ 10ನೇ ದಿನದ ಹೋರಾಟಕ್ಕೆ ಕಲಾಕೃತಿಯ ಮೂಲಕ ಬೆಂಬಲ: 60 ಅಡಿ ಉದ್ದದ ಸೀರೆಯಲ್ಲಿ ಸಾವಿರಾರು ಕೈಮುದ್ರೆಗಳು, ಹೆಜ್ಜೆಗಳು..!

ಬೆಂಗಳೂರು: ಗೌರವಧನವನ್ನು ₹15,000ಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಗುರುವಾರ 10ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟಕ್ಕೆ ನಟರು, ಬರಹಗಾರರು, ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಆಶಾ ಕಾರ್ಯಕರ್ತೆಯರ ಹಲವು ವರ್ಷಗಳ ಸೇವೆ, ಒಗ್ಗಟ್ಟು ಮತ್ತು ಹಕ್ಕುಗಳ ಹೋರಾಟವನ್ನು ಬಿಂಬಿಸುವ ವಿಶಿಷ್ಟ ಕಲಾಕೃತಿ ಗಮನಸೆಳೆದಿದೆ. ಕಲಾವಿದೆ ಅಲಕಾ ರಾವ್ ಅವರ ನೇತೃತ್ವದಲ್ಲಿ ರೂಪಿಸಿರುವ ಈ ಕಲಾಕೃತಿಯು ಆರು ಅಡಿ ಅಗಲ ಮತ್ತು 60 ಅಡಿ ಉದ್ದದ ಬಟ್ಟೆಯನ್ನು ಗುಲಾಬಿ ಬಣ್ಣದ ಸೀರೆಯ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ.

ಸೀರೆಯ ಮೇಲೆ ಆಶಾ ಕಾರ್ಯಕರ್ತೆಯರು ಗಾಢ ಗುಲಾಬಿ ಬಣ್ಣದ ಕೈಮುದ್ರೆಗಳನ್ನು ಒತ್ತಿದ್ದಾರೆ. ಪ್ರತಿಯೊಂದು ಮುದ್ರೆಯೂ ಮಹಿಳೆಯರ ಶ್ರಮ, ಸೇವೆ ಮತ್ತು ಹೋರಾಟವನ್ನು ಪ್ರತಿನಿಧಿಸುತ್ತದೆ. ಮೇಲ್ಭಾಗದಲ್ಲಿರುವ ಕಪ್ಪು ಬಣ್ಣದ ಎತ್ತಿದ ಕೈಗಳು ಮತ್ತು ಬಿಗಿದ ಮುಷ್ಟಿಗಳು ಧೈರ್ಯ, ಪ್ರತಿಭಟನೆ ಹಾಗೂ ಒಗ್ಗಟ್ಟಿನ ಸಂಕೇತವಾಗಿವೆ.

ಕೆಳಭಾಗದಲ್ಲಿರುವ ಒಂದೇ ದಿಕ್ಕಿನ ಕಪ್ಪು ಹೆಜ್ಜೆ ಗುರುತುಗಳು ಅವರ ವರ್ಷಗಳ ಸೇವೆ, ನಿರಂತರ ಓಡಾಟ ಮತ್ತು ನ್ಯಾಯದ ಕಡೆಗಿನ ಪಯಣವನ್ನು ಸೂಚಿಸುತ್ತವೆ. ಕಲಾಕೃತಿಯಲ್ಲಿ ಯಾವುದೇ ವ್ಯಕ್ತಿಯ ಮುಖವನ್ನು ಚಿತ್ರಿಸದೆ, ಇದು ಒಬ್ಬಿಬ್ಬರ ಹೋರಾಟವಲ್ಲ, ಸಾವಿರಾರು ಮಹಿಳೆಯರ ಒಗ್ಗಟ್ಟಿನ ಹೋರಾಟ ಎಂಬ ಸಂದೇಶ ಸಾರಲಾಗಿದೆ.

ಆಶಾ ಕಾರ್ಯಕರ್ತೆಯರೇ ತಮ್ಮ ಕೈಮುದ್ರೆಗಳ ಮೂಲಕ ಕಲಾಕೃತಿಯನ್ನು ರೂಪಿಸಿರುವುದು ಇದರ ವಿಶೇಷ. 60 ಅಡಿ ಬಟ್ಟೆಗೆ ಅಂತ್ಯವಿದ್ದರೂ ಅವರ ಹೋರಾಟಕ್ಕೆ ಕೊನೆಯಿಲ್ಲ. “ನಾವು ಇಲ್ಲಿದ್ದೇವೆ, ನಮಗೂ ಬೆಲೆ ಇದೆ, ನಮ್ಮ ಹೋರಾಟ ಮುಂದುವರಿಯುತ್ತದೆ” ಎಂಬ ಸಂದೇಶವನ್ನು ಈ ಕಲಾಕೃತಿ ಸಾರುತ್ತಿದೆ.