ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ನ (WPL) ಐದನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಟೂರ್ನಿ 2027ರ ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿದೆ. ಮಾರ್ಚ್ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿ ಇರುವ ಹಿನ್ನೆಲೆಯಲ್ಲಿ ಈ ಬಾರಿ ಜನವರಿಯಲ್ಲಿ ಆಯೋಜಿಸಲಾಗಿದೆ.
25 ದಿನಗಳ ಅವಧಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ವಡೋದರಾ ಮತ್ತು ಮುಂಬೈ ಆತಿಥ್ಯ ವಹಿಸಲಿವೆ. ವಡೋದರದ ಕೋಟಂಬಿ ಕ್ರೀಡಾಂಗಣದಲ್ಲಿ ಮೊದಲ 11 ಪಂದ್ಯಗಳು ನಡೆಯಲಿದ್ದು, ಜನವರಿ 14ರಂದು ಹಾಲಿ ಚಾಂಪಿಯನ್ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭವಾಗಲಿದೆ.

ಜನವರಿ 26ರಿಂದ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಎರಡನೇ ಹಂತದ ಪಂದ್ಯಗಳು ನಡೆಯಲಿವೆ. ಎಲಿಮಿನೇಟರ್ ಹಾಗೂ ಫೆಬ್ರವರಿ 7ರಂದು ನಡೆಯುವ ಫೈನಲ್ ಪಂದ್ಯಕ್ಕೂ ಇದೇ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಈ ಬಾರಿ ಬಿಸಿಸಿಐ ಹೋಮ್ ಅಂಡ್ ಅವೇ ಮಾದರಿಯನ್ನು ಕೈಬಿಟ್ಟಿದ್ದು, ಐದು ತಂಡಗಳು ವಡೋದರಾ ಮತ್ತು ಮುಂಬೈನಲ್ಲಿ ತಟಸ್ಥ ಮೈದಾನಗಳಲ್ಲಿ ಸೆಣಸಲಿವೆ. ಈ ಆವೃತ್ತಿಯಲ್ಲಿ ಡಬಲ್ ಹೆಡ್ಡರ್ ಪಂದ್ಯಗಳು ಇರುವುದಿಲ್ಲ.
