ಯಶವಂತಪುರ ರೈಲು ನಿಲ್ದಾಣ ₹480 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ: ಸೋಮಣ್ಣ

ಬೆಂಗಳೂರು: ಯಶವಂತಪುರ ರೈಲು ನಿಲ್ದಾಣವನ್ನು ಅಂದಾಜು ₹480 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಸೇವಾ ದಿವಸ’ ಕಾರ್ಯಕ್ರಮದಲ್ಲಿ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ರೈಲ್ವೆ ಸಿಬ್ಬಂದಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.

ರೈಲ್ವೆ ಸೇವೆಯಲ್ಲಿ ಸಮರ್ಪಣೆ ಹಾಗೂ ಬದ್ಧತೆ ಪ್ರದರ್ಶಿಸಿದ ಸಿಬ್ಬಂದಿಯನ್ನು ಸಚಿವರು ಗೌರವಿಸಿದರು. ಬಳಿಕ ಬೆಂಗಳೂರು ಕೇಂದ್ರದ ಸಂಸದ ಪಿ.ಸಿ. ಮೋಹನ್ ಅವರೊಂದಿಗೆ ‘ಆಶೀರ್ವಾದದ ದೀಪ’ ಬೆಳಗಿಸಿದರು. ವಂದೇ ಭಾರತ್ ರೈಲುಗಳ ನಿರ್ವಹಣಾ ಸಿಬ್ಬಂದಿ ಸೇರಿದಂತೆ ಸುಮಾರು 250 ರೈಲ್ವೆ ಸಿಬ್ಬಂದಿ ದೀಪ ಬೆಳಗಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿ ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಅವರ ರಾಷ್ಟ್ರಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಜನ್ಮದಿನವನ್ನು ‘ಸೇವಾ ದಿವಸ’ವಾಗಿ ಆಚರಿಸಲಾಗುತ್ತಿದೆ ಎಂದು ಸೋಮಣ್ಣ ಹೇಳಿದರು.

ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನಿ ಶ್ರಮಿಸುತ್ತಿದ್ದು, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯೊಂದಿಗೆ ಯುವಜನರಿಗೆ ಸ್ಫೂರ್ತಿ ನೀಡುತ್ತಿದ್ದಾರೆ ಎಂದರು.

ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ₹485 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದ್ದು, ಡಿಸೆಂಬರ್ 2026ರೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದರು.

ರೈಲ್ವೆ ಮತ್ತು ಹೆದ್ದಾರಿಗಳು ದೇಶದ ಮೂಲಸೌಕರ್ಯದ ಬೆನ್ನೆಲುಬಾಗಿದ್ದು, ರಾಷ್ಟ್ರದ ಪ್ರಗತಿಗೆ ಅವುಗಳ ನಿರಂತರ ಅಭಿವೃದ್ಧಿ ಅಗತ್ಯ. ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆ ನಿರ್ಮಾಣಕ್ಕೂ ಕೇಂದ್ರ ಸರ್ಕಾರ ಸಂಪೂರ್ಣ ಹಣಕಾಸು ಒದಗಿಸುತ್ತಿದ್ದು, ಇದರಿಂದ ಯೋಜನೆಗಳ ಅನುಷ್ಠಾನ ವೇಗ ಪಡೆಯುತ್ತಿದೆ ಎಂದರು.

ಸಂಸದ ಪಿ.ಸಿ. ಮೋಹನ್, ಭಾರತೀಯ ರೈಲ್ವೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ವೇಗ ಪಡೆದುಕೊಂಡಿದ್ದು, ರೈಲು ಮಾರ್ಗಗಳ ವಿದ್ಯುದ್ದೀಕರಣ ಬಹುತೇಕ ಪೂರ್ಣಗೊಂಡಿರುವುದು ಗಮನಾರ್ಹ ಬೆಳವಣಿಗೆ ಎಂದರು.

ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ರೈಲ್ವೆಯ ಸೇವೆ ಒಂದು ದಿನಕ್ಕೆ ಸೀಮಿತವಾಗದೆ 24×7, ವರ್ಷವಿಡೀ ನಡೆಯುವ ಜವಾಬ್ದಾರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪರೀಕ್ಷಿತ್ ಮೋಹನ್‌ಪುರಿಯಾ, ಪ್ರವೀಣ್ ಕಾತರಕಿ, ರೈಟ್ಸ್ ಪ್ರಧಾನ ವ್ಯವಸ್ಥಾಪಕ ಎಂ.ಜಿ. ಸುದೀಪ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.