ಗುವಾಹಟಿಯಲ್ಲಿ ಭೀಕರ ಗುಂಡಿನ ದಾಳಿ: ಐವರ ಸಾವು, ಪ್ರಮುಖ ಆರೋಪಿ ಬಂಧನ

ಗುವಾಹಟಿ: ಅಸ್ಸಾಂನ ಗುವಾಹಟಿಯ ಉಲುಬಾರಿ ಪ್ರದೇಶದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆದ ಒಂದು ಗಂಟೆಯೊಳಗೆ ಪ್ರಮುಖ ಆರೋಪಿ ಘನಕಾಂತ ಗೊಗೊಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ರಾತ್ರಿ 9 ಗಂಟೆ ಸುಮಾರಿಗೆ ಹೋಟೆಲ್ ಬಿಲಾಸ್ ಇನ್ ಸಮೀಪ ಈ ಘಟನೆ ನಡೆದಿದೆ. ಮೃತಪಟ್ಟವರಲ್ಲಿ ಹೋಟೆಲ್ ಮಾಲೀಕಿ ಹೆಲೆನಾ ಬರಾಲಿ, ಅವರ ಪುತ್ರ ದೇಬರ್ಶಿ ಕಶ್ಯಪ್ ಹಾಗೂ ನಾರಾಯಣ್ ದಾಸ್ ಸೇರಿದ್ದಾರೆ. ಮೃತ ಐವರಲ್ಲಿ ನಾಲ್ವರು ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ.

ಹೋಟೆಲ್ ಲೀಸ್ ಒಪ್ಪಂದ, ಆಸ್ತಿ ವಿವಾದ ಮತ್ತು ವೈಯಕ್ತಿಕ ದ್ವೇಷವೇ ಗುಂಡಿನ ದಾಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೋಟೆಲ್ ಮಾಲೀಕರು ಮತ್ತು ಗುತ್ತಿಗೆದಾರರ ನಡುವೆ ವಾಗ್ವಾದ ನಡೆದಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಘಟನೆಗೆ ಬಳಸಿದ ಶಸ್ತ್ರಾಸ್ತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಯಾಳು ಸತ್ಯೇಂದ್ರ ಪಾಠಕ್ ಅವರಿಗೆ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥರು ತಿಳಿಸಿದ್ದಾರೆ.

ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ವೈಜ್ಞಾನಿಕ ತನಿಖೆ ಕೈಗೊಂಡಿದ್ದಾರೆ. ಗುಂಡಿನ ದಾಳಿಯ ನಿಖರ ಕಾರಣ ಮತ್ತು ಆರೋಪಿಯ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.