ಅಯೋಧ್ಯೆ ರಾಮ ಮಂದಿರದಲ್ಲಿ ಮತ್ತೊಂದು ಆಕರ್ಷಣೆ; ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ

ಅಯೋಧ್ಯೆ: ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ ಸಂಕೀರ್ಣದಲ್ಲಿರುವ ‘ಸಪ್ತ ಮಂಟಪ’ದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಕಾರ, ವೈದಿಕ ಸಂಪ್ರದಾಯ ಮತ್ತು ಶಾಸ್ತ್ರೋಕ್ತ ವಿಧಿವಿಧಾನಗಳ ಅನುಸಾರ ಪ್ರತಿಮೆಗೆ ಅಭಿಷೇಕ ನೆರವೇರಿಸಿ, ಪೂಜೆ ಹಾಗೂ ಆರತಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿ ಡಾ. ನಿರ್ಮಲಾ ಯಾದವ್, ಟ್ರಸ್ಟ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿ, ಹಲವು ಸಂತರು ಹಾಗೂ ವಾಲ್ಮೀಕಿ ಸಮುದಾಯದ ಗಣ್ಯರು ಭಾಗವಹಿಸಿದ್ದರು. ಶ್ರೀ ಮಿಥಿಲೇಶ್ ನಂದಿನಿ ಶರಣ್ ಜಿ ಮಹಾರಾಜ್ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದರು.

ರಾಮಾಯಣದ ಕರ್ತೃ ಹಾಗೂ ಆದಿಕವಿ ಎಂದು ಗೌರವಿಸಲ್ಪಡುವ ಮಹರ್ಷಿ ವಾಲ್ಮೀಕಿ ಅವರ ಜನ್ಮದಿನದ ಆಚರಣೆಯಲ್ಲಿ ಪಾಲ್ಗೊಳ್ಳಲು ಭಕ್ತರು ಮಂದಿರ ಸಂಕೀರ್ಣದಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಅವರ ಸಾಹಿತ್ಯಿಕ ಕೊಡುಗೆ ಮತ್ತು ಪರಂಪರೆಯನ್ನು ಸ್ಮರಿಸಿ ಗೌರವ ಸಲ್ಲಿಸಲಾಯಿತು.