ರಾಷ್ಟ್ರಪತಿ ಭವನದಲ್ಲಿ ಹಸಿರು, ಡಿಜಿಟಲ್ ಮತ್ತು ಮಕ್ಕಳ ಸ್ನೇಹಿ ಯೋಜನೆಗಳಿಗೆ ಚಾಲನೆ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧ್ಯಕ್ಷೆಯಾಗಿ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನ ಮತ್ತು ರಾಷ್ಟ್ರಪತಿ ಎಸ್ಟೇಟ್‌ನಲ್ಲಿ ಹಸಿರು, ಡಿಜಿಟಲ್ ಹಾಗೂ ಮಕ್ಕಳ ಸ್ನೇಹಿ ಹಲವು ನಾಗರಿಕ ಕೇಂದ್ರಿತ ಯೋಜನೆಗಳಿಗೆ ಮಂಗಳವಾರ ಚಾಲನೆ ನೀಡಿದರು.

ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಮೊಬೈಲ್ ಆ್ಯಪ್ ಆಧಾರಿತ ಇ-ಆಡಿಯೊ ಮಾರ್ಗದರ್ಶಿ ಸೇವೆಯನ್ನು ಉದ್ಘಾಟಿಸಲಾಯಿತು. ಈ ಸೇವೆ ಹಿಂದಿ, ಇಂಗ್ಲಿಷ್ ಸೇರಿದಂತೆ 16 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ಸಂಕೇತ ಭಾಷೆಯ ವ್ಯವಸ್ಥೆಯನ್ನೂ ಒಳಗೊಂಡಿದೆ. ಆಗಸ್ಟ್ 5ರಿಂದ ಸೆಪ್ಟೆಂಬರ್ 5ರವರೆಗೆ ನಡೆಯಲಿರುವ ಇ-ಉಪಹಾರ್ ಮೂರನೇ ಆವೃತ್ತಿಗೂ ಚಾಲನೆ ನೀಡಲಾಗಿದ್ದು, ರಾಷ್ಟ್ರಪತಿಗಳಿಗೆ ಲಭಿಸಿದ 300 ಆಯ್ದ ಉಡುಗೊರೆಗಳನ್ನು ಸಾರ್ವಜನಿಕ ಹರಾಜಿಗೆ ಇಡಲಾಗುತ್ತದೆ.

ಮಕ್ಕಳಿಗಾಗಿ ‘ಬಚ್‌ಪನ್–ಬಾಲ್ ಪರಿಸರ’, ‘ಕಿಲ್ಕರಿ’ ಆಟದ ವಲಯ ಹಾಗೂ ‘ಸಮರ್ಥ ಅಂಗನವಾಡಿ-ಕಮ್-ಪಲ್ನಾ’ ಕೇಂದ್ರವನ್ನು ಉದ್ಘಾಟಿಸಲಾಯಿತು. ರಾಷ್ಟ್ರಪತಿ ಭವನ ಮತ್ತು ಸಮೀಪದ ಮೆಟ್ರೋ ನಿಲ್ದಾಣದ ನಡುವೆ ಮಹಿಳಾ ಚಾಲಕರು ಮತ್ತು ನಿರ್ವಾಹಕರಿಂದ ನಿರ್ವಹಿಸಲ್ಪಡುವ ಉಚಿತ ವಿದ್ಯುತ್ ಬಸ್ ಸೇವೆ ‘ರಾಹಿ’ಗೂ ರಾಷ್ಟ್ರಪತಿ ಚಾಲನೆ ನೀಡಿದರು.

ಇದೇ ವೇಳೆ, ನೆಟ್-ಜೀರೋ ಎನರ್ಜಿ ತಂತ್ರದಡಿ ಹೊಸ ಸೇವಾ ಬ್ಲಾಕ್‌ಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಡೆಹ್ರಾಡೂನ್‌ನ ರಾಷ್ಟ್ರಪತಿ ನಿಕೇತನ ಹಾಗೂ ಸಿಕಂದರಾಬಾದ್‌ನ ರಾಷ್ಟ್ರಪತಿ ನಿಲಯಂನಲ್ಲಿನ ವಸತಿ ಸೌಲಭ್ಯಗಳನ್ನು ಉದ್ಘಾಟಿಸಿದರು. ಸಿಬ್ಬಂದಿ ವಸತಿಗೃಹಗಳ ಪುನರಾಭಿವೃದ್ಧಿ ಕಾಮಗಾರಿಗೂ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ಮುರ್ಮು, ರಾಷ್ಟ್ರಪತಿ ಭವನವು ಭಾರತದ ಪ್ರಜಾಪ್ರಭುತ್ವ, ಸಾಂಸ್ಕೃತಿಕ ಪರಂಪರೆ ಮತ್ತು ಜನಸ್ನೇಹಿ ಆಡಳಿತದ ಪ್ರತೀಕವಾಗಿ ರೂಪುಗೊಂಡಿದೆ ಎಂದು ಹೇಳಿದರು.

ನಂತರ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ರಾಷ್ಟ್ರಪತಿ ಮುರ್ಮು ಅವರ ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ದಾಖಲಿಸುವ ಐದು ಪ್ರಕಟಣೆಗಳನ್ನು ಬಿಡುಗಡೆ ಮಾಡಿ ಮೊದಲ ಪ್ರತಿಗಳನ್ನು ರಾಷ್ಟ್ರಪತಿಗಳಿಗೆ ಹಸ್ತಾಂತರಿಸಿದರು. ಬುಡಕಟ್ಟು ಸಮುದಾಯದ ಹಿನ್ನೆಲೆಯಿಂದ ರಾಷ್ಟ್ರದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೇರಿದ ಅವರ ಪಯಣ ಭಾರತೀಯ ಪ್ರಜಾಪ್ರಭುತ್ವದ ಒಳಗೊಳ್ಳುವಿಕೆಯ ಪ್ರತೀಕವಾಗಿದೆ ಎಂದು ಉಪರಾಷ್ಟ್ರಪತಿ ಶ್ಲಾಘಿಸಿದರು.